ಬಿಗ್ನೋನಿಯೇಸೀ ಕುಟುಂಬಕ್ಕೆ ಸೇರಿದ ಒಂದು ಪರ್ಣಪಾತಿ ಮರ. ಸ್ಟೀರಿಯೋಸ್ಪರ್ಮಮ್ ಸೈಲೋಕಾರ್ಪಮ್ ಇದರ ಶಾಸ್ತ್ರೀಯ ಹೆಸರು; ಕೋಣನ ಕೊಂಬುಮರ ಎಂದೂ ಪರ್ಯಾಯವಾಗಿ ಕರೆಯುತ್ತಾರೆ. ಇದರ ತವರು ಭಾರತ ; ಬೆಟ್ಟಗುಡ್ಡಗಳಲ್ಲಿ ಕಾಣದೊರೆಯುತ್ತದೆ. ಸುಮಾರು 10ರಿಂದ 20ಮೀ. ಎತ್ತರಕ್ಕೆ ಬೆಳೆಯುತ್ತದೆ. ಎಲೆಗಳು ದೊಡ್ಡವು; 1 ಮೀ. ಉದ್ದ ಇವೆ. ಫೆಬ್ರುವರಿ-ಮಾರ್ಚ್ ತಿಂಗಳಿನಲ್ಲಿ ಎಲೆಗಳೆಲ್ಲ ಉದುರಿಹೋಗುತ್ತವೆ. ಹೂಗಳು ಅರಳುವುದು ಮಾರ್ಚ್ ತಿಂಗಳಲ್ಲಿ. ಹೂಗಳ ಬಣ್ಣ ಬಿಳಿ, ಮಧುರವಾದ ವಾಸನೆಯೂ ಉಂಟು. ಕಾಯಿಗಳು ಕೋಣನ ಕೊಂಬಿನಂತಿವೆ.

ಚೌಬೀನೆ ಗಟ್ಟಿಯಾಗಿರುವುದರಿಂದ ಬೀರು ಮುಂತಾದ ವಸ್ತುಗಳ ತಯಾರಿಕೆಗೆ ಬಳಸುತ್ತಾರೆ. ಮರದಿಂದ ತೆಗೆಯಬಹುದಾದ ರಾಳವನ್ನು ಚರ್ಮರೋಗಗಳಿಗೆ ಉಪಯೋಗಿಸುವುದುಂಟು. ಅಲ್ಲದೆ ಈ ರಾಳ ಉತ್ತೇಜಕ, ಕಫಹಾರಿ ಹಾಗೂ ಪರೋಪಜೀವಿನಾಶಕವೂ ಹೌದು.	(ಎಸ್ಐ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ